	ಕ್ರೈನಾಯ್ಡಿಯ 
ಎಕಿನೋಡರ್ಮೇಟ ವಿಭಾಗಕ್ಕೆ (ಕಂಟಕಚರ್ಮಿಗಳು) ಸೇರಿದ ಒಂದು ವರ್ಗ. ಇದಕ್ಕೆ ಸೇರಿದ ಪ್ರಾಣಿಗಳೆಲ್ಲವೂ ಸಮುದ್ರನಿವಾಸಿಗಳು. ಇವನ್ನು ಆಡುಮಾತಿನಲ್ಲಿ ಕಡಲ ತಾವರೆಗಳು (ಸೀ ಲಿಲೀಸ್) ಮತ್ತು ಗರಿ ನಕ್ಷತ್ರಗಳು (ಫೆದರ್ ಸ್ಟಾರ್ಸ್) ಎಂದು ಕರೆಯಲಾಗುತ್ತದೆ. ಎಕಿನೋಡರ್ಮೇಟದ ಉಳಿದ ಪ್ರಾಣಿಗಳಲ್ಲಿರುವಂತೆ ಇವುಗಳಲ್ಲೂ ಪಂಚ ಆರೀಯ ಸಮಾಂಗತೆ, ಜಲ ಪರಿಚಲನಾಂಗ ವ್ಯವಸ್ಥೆ ಮತ್ತು ಸುಣ್ಣಕಲ್ಲಿನಿಂದ ಕೂಡಿದ ಫಲಕಗಳನ್ನುಳ್ಳ ಬಾಹ್ಯ ಕವಚಗಳು ಇವೆ. ಆದರೆ ಈ ಪ್ರಾಣಿಗಳು ತಮ್ಮ ಜೀವಮಾನವಿಡೀ ಸಾಗರದ ತಳಕ್ಕೆ ಅಂಟಿಕೊಂಡು ಜೀವಿಸುವ ಸ್ಥಾವರ ಪ್ರಾಣಿಗಳಾಗಿದ್ದು ಉಳಿದ ಎಕಿನೋಡರ್ಮಗಳಿಂದ ಭಿನ್ನವಾಗಿವೆ.

	ದೇಹದ ಉದ್ದ ಕೆಲವೇ ಇಂಚುಗಳಿಂದ ಹಲವಾರು ಅಡಿಗಳವರೆಗೆ ವ್ಯತ್ಯಾಸವಾಗುತ್ತದೆ. ಕೆಲವು ಪ್ರಭೇದಗಳ ದೇಹ ವರ್ಣರಂಜಿತವಾಗಿರುವುದುಂಟು. ಹಲವಾರು ಸುತ್ತುಗಳಲ್ಲಿ ಜೋಡಣೆಗೊಂಡಿರುವ ತಟ್ಟೆಗಳಿಂದ ಕೂಡಿದ ಬಟ್ಟಲಿನಾಕಾರದ ರಚನೆಯೊಳಗೆ ದೇಹ ಹುದುಗಿದೆ. ಈ ಬಟ್ಟಲಿಗೆ ಕೇಲಿಕ್ಸ್ ಎಂದು ಹೆಸರು. ಕೆಲವು ಪ್ರಭೇದಗಳಲ್ಲಿ ಈ ಬಟ್ಟಲಿಗೆ ಅಂಟಿಕೊಂಡಂತೆ ಒಂದು ಉದ್ದನೆಯ ತೊಟ್ಟು ಇದೆ. ಇದರ ಸಹಾಯದಿಂದ ಪ್ರಾಣಿಯ ದೇಹ ಸಾಗರ ತಳಕ್ಕೆ ಅಂಟಿರುತ್ತದೆ. ಹಲವಾರು ಸಣ್ಣ ತಟ್ಟೆಗಳಿಂದ ಕೂಡಿದ ಕಂಬದಂಥ ರಚನೆಯಿದು. ತಟ್ಟೆಗಳು ಸ್ನಾಯುಗಳ ಸಹಾಯದಿಂದ ಒಂದಕ್ಕೊಂದು ಅಂಟಿರುವುದರಿಂದ ತೊಟ್ಟು ಸುಲಭವಾಗಿ ಬಾಗುತ್ತದೆ. ಈ ಕಂಬ ಕವಲೊಡೆದಿರಬಹುದು ಇಲ್ಲವೆ ಏಕವಾಗಿದ್ದು ಅಲ್ಲಲ್ಲಿ ನಿರ್ದಿಷ್ಟ ಅಂತರಗಳಲ್ಲಿ ಬೇರುಗಳಂಥ ರಚನೆಗಳನ್ನು ಪಡೆದಿರಬಹುದು. ಇವುಗಳಿಗೆ ಸಿರ್ರಿಗಳೆಂದು ಹೆಸರು. ಸಾಮಾನ್ಯವಾಗಿ ಗರಿನಕ್ಷತ್ರಗಳಲ್ಲಿ (ಉದಾ: ಆಂಟಿಡಾನ್ ಜಾತಿ) ತೊಟ್ಟಿನ ಮೊದಲನೆಯ ಖಂಡ ಮಾತ್ರ ಇರುತ್ತದೆ. ಕಡಲತಾವರೆಗಳಲ್ಲಿ (ಉದಾ: ರೈಜೊಕ್ರೈನಸ್, ಪೆಂಟಕ್ರೈನಸ್, ಬಾಟ್ರಿಯೊಕ್ರೈನಸ್ ಇತ್ಯಾದಿ) ತೊಟ್ಟು ಬಲು ಉದ್ದ ಮತ್ತು ಅದರ ತುದಿಯಲ್ಲಿರುವ ಬಟ್ಟಲಿನಲ್ಲಿ ದೇಹ ಹುದುಗಿರುತ್ತದೆ.

	ಎರಡು ಬಗೆಯ ದೇಹ ರಚನೆಯುಳ್ಳ ಪ್ರಾಣಿಗಳಲ್ಲೂ ಬಟ್ಟಲಿನ ಅಂಚಿನಿಂದ ಉದ್ದವಾದ ಹಾಗೂ ಸುಲಭವಾಗಿ ಬಾಗುವಂಥ ಕೈಗಳು ಹೊರಡುತ್ತವೆ. ಇವುಗಳ ಮೂಲಸಂಖ್ಯೆ 5. ಆದರೆ ಹೆಚ್ಚು ಕಡಿಮೆ ಎಲ್ಲ ಬಗೆಯ ಕ್ರೈನಾಯಿಡುಗಳಲ್ಲೂ ಒಂದೊಂದು ಕೈಯೂ ಬುಡದಲ್ಲಿ ಇಬ್ಭಾಗವಾಗಿ ಸೀಳುಗೊಂಡು ಒಟ್ಟು 10 ಕೈಗಳಾಗುತ್ತವೆ. ಉಷ್ಣವಲಯದಲ್ಲಿ ವಾಸಿಸುವ ಕಡಲತಾವರೆಗಳಲ್ಲಿ ಇವು ಹೆಚ್ಚು ವಿಭಾಗವಾಗಿ ಕೈಗಳ ಒಟ್ಟು ಸಂಖ್ಯೆ ಹೆಚ್ಚಾಗುತ್ತದೆ. ಒಂದೊಂದು ಕೈಯಲ್ಲೂ ಪಿನ್ಯೂಲುಗಳೆಂಬ ಹಲವಾರು ರಚನೆಗಳಿದ್ದು ಇಡೀ ಕೈ ಒಂದು ಗರಿಯಂತೆ ಕಾಣುವ ಹಾಗೆ ಇವು ಮಾಡುತ್ತವೆ.

	ಬಟ್ಟಲಿನ ಮೇಲಿನ ಹಾಗೂ ಕೈಗಳ ಬುಡಗಳ ಬಳಿಯ ಭಾಗಕ್ಕೆ ತಟ್ಟೆ (ಡಿಸ್ಕ್) ಎಂದು ಹೆಸರು. ಇದರ ಕೇಂದ್ರಭಾಗದಲ್ಲಿ ಬಾಯಿಯೂ ಒಂದು ಪಕ್ಕಕ್ಕೆ, ಕೊಂಚ ಮೇಲಕ್ಕೆ ಎತ್ತಿರುವಂತಿರುವ ಗುದದ್ವಾರವೂ ಇವೆ. ದೇಹದೊಳಗೆ ಉದ್ದವಾದ ಮತ್ತು ಸುರುಳಿ ಸುತ್ತಿರುವ ಆಹಾರನಾಳ ಉಂಟು. ಬಾಯ ಸುತ್ತ ಒಂದು ತೋಡು ಇದ್ದು ಇದರಿಂದ ಸಣ್ಣ ಗಾತ್ರದ ಹಲವಾರು ತೋಡುಗಳು ಉತ್ಪತ್ತಿಯಾಗುತ್ತವೆ. ಇವು ಒಂದೊಂದೂ ಕೈಯ ಒಳಭಾಗಕ್ಕೂ ಸಾಗಿ ಪಿನ್ಯೂಲುಗಳಿರುವೆಡೆಯಲ್ಲೆಲ್ಲ ಒಂದೊಂದು ಕವಲಾಗಿ ಭಾಗವಾಗುತ್ತವೆ. ತೋಡಿನ ಈ ವ್ಯವಸ್ಥೆಗೆ ಆಂಬುಲೇಕ್ರಲ್ ತೋಡು ವ್ಯವಸ್ಥೆ ಎಂದು ಹೆಸರು. ಇದು ಬೇರೆ ಎಕಿನೋಡರ್ಮ್ ಪ್ರಾಣಿಗಳಲ್ಲಿರುವ ಆಂಬುಲೇಕ್ರಲ್ ತೋಡಿಗೆ ಸಮಾನವಾಗಿರುವುದಾದರೂ ಇದರಿಂದ ಹುಟ್ಟುವ ನಳಿಕೆ ಪಾದಗಳು ಬರಿಯ ಆಹಾರವನ್ನು ಹಿಡಿಯುವ ಕಾರ್ಯವನ್ನು ಮಾತ್ರ ನಿರ್ವಹಿಸುತ್ತವೆ; ಪ್ರಾಣಿ ಚಲನೆಯಲ್ಲಿ ಪಾಲುಗೊಳ್ಳುವುದಿಲ್ಲ. ಕ್ರೈನಾಯಿಡುಗಳ ಆಹಾರ ಸಾಗರದಲ್ಲಿ ಕಾಣಬರುವ ಸೂಕ್ಷ್ಮಗಾತ್ರದ ತೇಲುಜೀವಿಗಳು. ಕೈಗಳಲ್ಲಿನ ಪಿನ್ಯೂಲುಗಳಲ್ಲಿ ಹುದುಗಿರುವ ಶಿಲಕೆಗಳ ಚಲನೆಯಿಂದ ಆಹಾರವನ್ನು ಬಾಯೆಡೆಗೆ ಎಳೆದುಕೊಳ್ಳುತ್ತವೆ.

	ಬಟ್ಟಲಿನ ಬುಡದಲ್ಲಿ ಒಂದು ಪುಟ್ಟ ನರಸಮೂಹವಿದೆ. ಇದೇ ಮಿದುಳು. ಇದರಿಂದ ಒಂದೊಂದು ಕೈಯೆಡೆಗೂ ಒಂದೊಂದು ನರಹುರಿ ಹೊರಡುತ್ತದೆ.

	ಕ್ರೈನಾಯಿಡ್ ಪ್ರಾಣಿಗಳಲ್ಲಿ ಲಿಂಗಭೇದವಿದೆ. ಪ್ರತಿಯೊಂದು ಕೈಯ ಮಧ್ಯಭಾಗದಲ್ಲಿರುವ ಪಿನ್ಯೂಲುಗಳಲ್ಲಿ ಉಬ್ಬುಗಳಂತೆ ಇರುವ ರಚನೆಗಳೇ ಜನನಾಂಗಗಳು. ಕಡಲತಾವರೆಗಳ ಸಂತಾನ ಕ್ರಮಗಳ ಬಗ್ಗೆ ಏನೂ ತಿಳಿದಿಲ್ಲ. ಗರಿನಕ್ಷತ್ರಗಳಲ್ಲಿ ಮಾತ್ರ ಈ ಬಗ್ಗೆ ಅಧ್ಯಯನ ಕೊಂಚ ನಡೆದಿದೆ. ಅಂಡಗಳ ನಿಷೇಚನ ಸಮುದ್ರದಲ್ಲಿ ಪ್ರಾಣಿದೇಹದ ಹೊರಭಾಗದಲ್ಲಿ ನಡೆಯುತ್ತದೆ. ಕ್ರಮೇಣ ಇವು ಪೀಪಾಯಿ ಆಕಾರದ ಡಿಂಬಗಳಾಗಿ ಬೆಳೆಯುತ್ತವೆ. ಇವಕ್ಕೆ ಬಾಯಿಯಿಲ್ಲ. ಮೊಟ್ಟೆಗಳಲ್ಲಿ ಶೇಖರಣೆಗೊಂಡ ಬಂಡಾರವನ್ನು ತಮ್ಮ ಪೋಷಣೆಗೆ ಬಳಸಿಕೊಳ್ಳುತ್ತವೆ. ಕೆಲವು ದಿನಗಳ ಅನಂತರ ಇವು ಸಾಗರ ತಳಕ್ಕೆ ಇಳಿದು ಉದ್ದವಾದ ತೊಟ್ಟುಳ್ಳ ಡಿಂಬಗಳಾಗಿ ಪರಿವರ್ತಿತವಾಗಿ ನೆಲಕ್ಕೆ ಅಂಟಿಕೊಳ್ಳುತ್ತವೆ. ಇವಕ್ಕೆ ಪೆಂಟಕ್ರೈನಾಯಿಡ್ ಡಿಂಬಗಳೆಂದು ಹೆಸರು. ಇವುಗಳ ದೇಹದ ಮೇಲ್ತುದಿಯಲ್ಲಿ ಬಟ್ಟಲು ರೂಪುಗೊಂಡು ಡಿಂಬಗಳು ಆಹಾರ ಸೇವನೆಯಲ್ಲಿ ತೊಡಗುತ್ತವೆ. ಕಾಲಕ್ರಮೇಣ ಡಿಂಬಗಳು ಬೆಳೆದು ಗರಿ ನಕ್ಷತ್ರಗಳಾಗಿ ರೂಪುಗೊಳ್ಳುತ್ತವೆ. ದಕ್ಷಿಣ ಮೇರು ಪ್ರದೇಶದಲ್ಲಿ ಕಾಣಬರುವ ಪ್ರಾಣಿಗಳಲ್ಲಿ ಬೆಳವಣಿಗೆಯ ಪ್ರಾರಂಭದ ಹಂತಗಳು ತಾಯಿ ದೇಹದೊಳಗಿನ ಕಾವುಗೂಡುಗಳಲ್ಲಿ ನಡೆಯುತ್ತವೆ.

	ಕ್ರೈನಾಯ್ಡಿಯ ವರ್ಗದಲ್ಲಿ ಸುಮಾರು 600-700 ಪ್ರಭೇದಗಳಿವೆ. ಇಂದು ಜೀವಿಸಿರುವ ಬಗೆಗಳನ್ನು ಆರ್ಟಿಕ್ಯುಲೇಟ ಎಂಬ ಗಣಕ್ಕೆ ಸೇರಿಸಲಾಗಿದೆ. ಈ ಗಣದ ಮೂರು ಮುಖ್ಯ ಕುಟುಂಬಗಳು ಇವು-ಐಸೊಕ್ರೈನಿಡೀ, ಆಂಟಿಡಾನಿಡೀ ಮತ್ತು ಕೊಮಾಸ್ಟರಿಡೀ. (ನೋಡಿ- ಎಕಿನೊಡರ್ಮೇಟ)             (ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ